ಹರಿಹರ: ತಾಲೂಕು ಆಸ್ಪತ್ರೆಯಲ್ಲಿ ನೂರಾರು ನಾಯಿಗಳ ಹಾವಳಿ – ರೋಗಿಗಳಲ್ಲಿ ಹೆಚ್ಚಿದ ಆತಂಕ, ಅಧಿಕಾರಿಗಳ ನಿರ್ಲಕ್ಷ್ಯ!
ಆಸ್ಪತ್ರೆಯ ಒಳಗೆ ಮತ್ತು ಹೊರಗೆ ನೂರಾರು ಬೀದಿ ನಾಯಿಗಳು ಹಿಂಡು

ಹರಿಹರ: ತಾಲೂಕು ಆಸ್ಪತ್ರೆಯಲ್ಲಿ ನೂರಾರು ನಾಯಿಗಳ ಹಾವಳಿ – ರೋಗಿಗಳಲ್ಲಿ ಹೆಚ್ಚಿದ ಆತಂಕ, ಅಧಿಕಾರಿಗಳ ನಿರ್ಲಕ್ಷ್ಯ!
ವಿಜಯ್ ಪ್ರಭಾಸ್ ನ್ಯೂಸ್ ಹರಿಹರ: ಇಲ್ಲಿನ ದಾಮೋದರ ಪೈ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣವು ಸದ್ಯ ರೋಗಿಗಳನ್ನು ಗುಣಪಡಿಸುವ ಕೇಂದ್ರವಾಗಿ ಉಳಿಯದೆ, ನಾಯಿಗಳ ತಾಣವಾಗಿ ಮಾರ್ಪಟ್ಟಿದೆ. ಆಸ್ಪತ್ರೆಯ ಒಳಗೆ ಮತ್ತು ಹೊರಗೆ ನೂರಾರು ಬೀದಿ ನಾಯಿಗಳು ಹಿಂಡು ಹಿಂಡಾಗಿ ಬೀಡುಬಿಟ್ಟಿದ್ದು, ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ತೀವ್ರ ಭೀತಿಯಲ್ಲೇ ದಿನದೂಡುವಂತಾಗಿದೆ.
ಆಸ್ಪತ್ರೆಗೆ ಬರುವ ಒಳರೋಗಿಗಳು ಹಾಗೂ ಹೊರರೋಗಿಗಳು (OPD) ಯಾರು, ಯಾವಾಗ ತಮ್ಮ ಮೇಲೆ ದಾಳಿ ಮಾಡುತ್ತಾರೋ ಎಂಬ ಹೆದರಿಕೆಯಿಂದಲೇ ಆಸ್ಪತ್ರೆಗೆ ಹೆಜ್ಜೆ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. “ಆಸ್ಪತ್ರೆಗೆ ರೋಗ ಗುಣಪಡಿಸಿಕೊಳ್ಳಲು ಬಂದರೆ, ಇಲ್ಲಿನ ನಾಯಿಗಳ ಹಿಂಡು ನೋಡಿ ಕಾಯಿಲೆ ಮತ್ತಷ್ಟು ಹೆಚ್ಚಾಗುವಂತಾಗಿದೆ. ಯಾವಾಗ ಯಾವ ನಾಯಿ ಕಚ್ಚುತ್ತದೋ ಗೊತ್ತಿಲ್ಲ,” ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ನಮ್ಮ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಧಿಕಾರಿಗಳ, ಸಿಬ್ಬಂದಿಗಳ ಮೌನ:
ಇಷ್ಟೆಲ್ಲಾ ಭೀಕರ ಪರಿಸ್ಥಿತಿ ಇದ್ದರೂ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ ಇದುವರೆಗೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಒಳಗೆ ಮುಕ್ತವಾಗಿ ಓಡಾಡುವ ನಾಯಿಗಳನ್ನು ಓಡಿಸಲು ಕನಿಷ್ಠ ಕಾಳಜಿಯನ್ನೂ ಸಿಬ್ಬಂದಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ಮತ್ತು ನಗರಸಭೆ ತಕ್ಷಣವೇ ಗಮನಹರಿಸಿ, ಆಸ್ಪತ್ರೆ ಆವರಣದಲ್ಲಿರುವ ಬೀದಿ ನಾಯಿಗಳ ಹಾವಳಿಗೆ ಮುಕ್ತಿ ಹಾಡಬೇಕಿದೆ. ರೋಗಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.
