ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಕರವೇ ತೀವ್ರ ವಿರೋಧ: ಹರಿಹರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಹರಿಹರ ತಾಲೂಕು ಘಟಕದ ವತಿಯಿಂದ ತರಕಾರಿ ವ್ಯಾಪಾರಿಗಳ ಪರವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು
ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಕರವೇ ತೀವ್ರ ವಿರೋಧ: ಹರಿಹರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಹರಿಹರ: ನಗರದ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಬಡ ಜನತೆಗೆ ನ್ಯಾಯ ಒದಗಿಸಿಕೊಡಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹರಿಹರ ತಾಲೂಕು ಘಟಕದ ವತಿಯಿಂದ ತರಕಾರಿ ವ್ಯಾಪಾರಿಗಳ ಪರವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಫಕೀರ್ ಸ್ವಾಮಿ ಮಠದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಶಿವಮೊಗ್ಗ ರಸ್ತೆಯ ಮೂಲಕ ತಾಲೂಕು ಆಡಳಿತ ಕಚೇರಿ ಆವರಣಕ್ಕೆ ಬಂದು ತಲುಪಿತು. ನಂತರ ತಾಲೂಕು ದಂಡಾಧಿಕಾರಿಗಳಾದ ಸಂತೋಷ್ ಅವರಿಗೆ ಕರವೇ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರಿಹರ ತಾಲೂಕು ಅಧ್ಯಕ್ಷರಾದ ರಮೇಶ್ ಮಾನೆ, “ದಿನನಿತ್ಯದ ದುಡಿಮೆಯನ್ನೇ ನಂಬಿರುವ ಬಡ ವ್ಯಾಪಾರಸ್ಥರಿಗೆ 2014ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಯಾವುದೇ ರೀತಿಯ ತೊಂದರೆ ಕೊಟ್ಟು ಹೊರದೂಡಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಇವರನ್ನು ಒಕ್ಕಲೆಬ್ಬಿಸುವ ಕೃತ್ಯಗಳು ಹೆಚ್ಚಾಗುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಅಧ್ಯಕ್ಷ ಪ್ರೀತಮ್ ಬಾಬು ಮಾತನಾಡಿ, “ಹರಿಹರ ನಗರದ 22ನೇ ವಾರ್ಡಿನ ಸಾರ್ವಜನಿಕ ಉದ್ಯಾನವನವನ್ನು ತೆರವುಗೊಳಿಸಲು ರೇಲ್ವೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಇದು ಬಡವರ ಜೀವನದ ಜೊತೆ ಚೆಲ್ಲಾಟವಾಡುವ ಅಮಾನವೀಯ ಕೃತ್ಯವಾಗಿದೆ. ಅಧಿಕಾರಿಗಳೊಂದಿಗೆ ಸೂಕ್ತ ಚರ್ಚೆ ನಡೆಸಿ, ಬಡ ವ್ಯಾಪಾರಸ್ಥರಿಗೆ ಪರ್ಯಾಯ ಜಾಗ ಕಲ್ಪಿಸಬೇಕು,” ಎಂದು ಒತ್ತಾಯಿಸಿದರು.
ಕರವೆ ಮುಖಂಡರಾದ ಮಗ್ದೂಮ್ ಮಾತನಾಡಿ ಗಾಂಧಿ ಮೈದಾನದ ಪಕ್ಕದಲ್ಲಿರುವ 50-60 ಬಡ ತರಕಾರಿ ವ್ಯಾಪಾರಸ್ಥರ ಹಾಗೂ ಮೂಲನಿವಾಸಿಗಳ ಕುಟುಂಬಗಳನ್ನು ತೆರವುಗೊಳಿಸುವ ಆದೇಶಕ್ಕೆ ಕಾನೂನಾತ್ಮಕವಾಗಿ ತಡೆ ನೀಡಬೇಕು. ಯಾವುದೇ ಕಾರಣಕ್ಕೂ ಇವರನ್ನು ಬೀದಿಪಾಲು ಮಾಡದೆ ನ್ಯಾಯ ಒದಗಿಸಿಕೊಡಬೇಕೆಂದು ಕರವೇ ಈ ಮೂಲಕ ತೀವ್ರವಾಗಿ ಒತ್ತಾಯಿಸಿದೆ.
ತಾಲೂಕು ದಂಡಾಧಿಕಾರಿಗಳು ತಹಶಿಲ್ದಾರ ಸಂತೋಷ ರವರು ಮಾತನಾಡಿ ಈ ಮನವಿ ಸರ್ಕಾರಕ್ಕೆ ಈ ಕೂಡಲ್ಲೆ ಕಳಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕರವೇ ತಾಲೂಕು ಉಪಾಧ್ಯಕ್ಷ ಅಲಿ ಅಕ್ಬರ್, ಮುಗ್ದುಮ್, ಸಿದ್ದಪ್ಪ, ರಜಾಕ್, ರಂಗಣ್ಣ, ಜಯಣ್ಣ, ಊರಮ್ಮ ದೇವಿ ಬೀದಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಗಣೇಶ್ ಬಿ, ಕೊಟ್ರೇಶ್, ಕಲಂದರ್, ಅಮಜಾದ್, ಹಾಲೇಶ್, ಗಣೇಶ್, ಪ್ರಶಾಂತ್, ವಾಣಿ, ಅರುಣ್, ಗಂಗಾಧರ್ ಎಸ್, ದೀಪಕ್ ಭೂತೆ, ಮಲ್ಲೇಶ್, ದಾದಾಪಿರ್ ಸೇರಿದಂತೆ ನೂರಾರು ವ್ಯಾಪಾರಸ್ಥರು ಭಾಗವಹಿಸಿದ್ದರು.
ವರದಿ ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ