ದಾವಣಗೆರೆ: ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ; ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ
ಪದವೀಧರ ಕ್ಷೇತ್ರ ನೋಂದಣಿಗೆ ಮನವಿ:

ದಾವಣಗೆರೆ: ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ; ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ
ವಿಜಯ್ ಪ್ರಭಾಸ್ ನ್ಯೂಸ್ ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕರಡು ಮತದಾರರ ಪಟ್ಟಿಯ ಪ್ರಕಾರ 1,808 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 12,98,219 ಮತದಾರರಿದ್ದಾರೆ. ಪರಿಶೀಲನೆ ವೇಳೆ ಸೂಕ್ತ ದಾಖಲೆ ಒದಗಿಸದ 7,086 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಶೇ. 100 ರಷ್ಟು ನೋಟಿಸ್‌ಗಳು ತಲುಪಿವೆ. ಈ ಪೈಕಿ ಈಗಾಗಲೇ 5,461 (ಶೇ. 50 ಕ್ಕೂ ಹೆಚ್ಚು) ಜನರ ವಿಚಾರಣೆ ಪೂರ್ಣಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಲಾಗುವುದು ಎಂದರು. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23 ರ ವರೆಗೆ ಕಾಲಾವಕಾಶವಿದೆ.
ಸ್ವಯಂಪ್ರೇರಿತವಾಗಿ ಹೆಸರು ರದ್ದುಗೊಳಿಸಲು ಅವಕಾಶವಿಲ್ಲ:
ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಮತದಾರರ ಹೆಸರುಗಳನ್ನು ಕೈಬಿಡಬೇಕೆಂದು ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, “ಅಧಿಕಾರಿಗಳಿಗೆ ಸ್ವಯಂಪ್ರೇರಿತವಾಗಿ ಮತದಾರರ ಹೆಸರು ಡಿಲೀಟ್ ಮಾಡುವ ಅಧಿಕಾರವಿಲ್ಲ. ಕೇವಲ ಮೃತಪಟ್ಟವರು ಮತ್ತು ದ್ವಿಪ್ರತಿ (Duplicate) ಹೆಸರುಗಳನ್ನು ಮಾತ್ರ ನಿಯಮಾನುಸಾರ ಕೈಬಿಡಬಹುದು. ಮತದಾರರು ಬೇರೆಡೆ ವಾಸವಿದ್ದಾರೆ ಎಂಬ ಕಾರಣಕ್ಕೆ ಅಧಿಕಾರಿಗಳೇ ತಾವಾಗಿ ಹೆಸರು ರದ್ದುಪಡಿಸಲು ಬರುವುದಿಲ್ಲ. ಅದಕ್ಕೆ ಮತದಾರರಿಂದಲೇ ‘ನಮೂನೆ-7’ ಸಲ್ಲಿಕೆಯಾಗುವುದು ಕಡ್ಡಾಯ,” ಎಂದು ತಿಳಿಸಿದರು.
ಮತದಾರರ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ 5 ಜನ ನೇಪಾಳಿ ಪ್ರಜೆಗಳು ಪತ್ತೆಯಾಗಿದ್ದು, ಅಗತ್ಯ ಕ್ರಮಕ್ಕಾಗಿ ಅವರ ವಿವರಗಳನ್ನು ಚುನಾವಣಾ ಆಯೋಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಒಳಾಡಳಿತ ಇಲಾಖೆಗೆ ರವಾನಿಸಲಾಗಿದೆ ಎಂದು ಅವರು ವಿವರಿಸಿದರು.
ಕರಡು ಪಟ್ಟಿ ಪ್ರಕಟವಾದ ನಂತರ 15 ಜನ ಮೃತಪಟ್ಟವರು ಸೇರಿದಂತೆ ಒಟ್ಟು 18 ಜನರ ಹೆಸರುಗಳನ್ನು ಮಾತ್ರ ಇದುವರೆಗೆ ತಿರಸ್ಕಾರ ಮಾಡಲಾಗಿದೆ. ವಿದೇಶದಲ್ಲಿರುವವರು ಅಥವಾ ಅನಾರೋಗ್ಯ ಪೀಡಿತರ ಪರವಾಗಿ ಅವರ ಕುಟುಂಬದ ಸದಸ್ಯರು ವಿಚಾರಣೆಗೆ ಹಾಜರಾಗಿ ದಾಖಲೆ ಸಲ್ಲಿಸಲು ಆಯೋಗ ಸಡಿಲಿಕೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ಪದವೀಧರ ಕ್ಷೇತ್ರ ನೋಂದಣಿಗೆ ಮನವಿ:
ಆಗ್ನೇಯ ಪದವೀಧರ ಮತಕ್ಷೇತ್ರದ ಮತದಾರರ ಸಂಖ್ಯೆಯು 24,281 ರಿಂದ 29,739 ಕ್ಕೆ ಏರಿಕೆಯಾಗಿದೆ. ಇನ್ನೂ 401 ಹೊಸ ಅರ್ಜಿಗಳು ಪರಿಶೀಲನೆಗೆ ಬಾಕಿ ಇವೆ. ಪದವೀಧರ ಮತದಾರರ ನೋಂದಣಿಯು ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹ ಪದವೀಧರರು ತಕ್ಷಣವೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.