ಮಲೇಬೆನ್ನೂರು ಪುರಸಭೆ ನಿರ್ಲಕ್ಷ್ಯ: ಗೌಸ್ ನಗರ, ಟಿಪ್ಪು ನಗರದಲ್ಲಿ ರಸ್ತೆ ಪಾಲಾಗುತ್ತಿದೆ ಕುಡಿಯುವ ನೀರು!
ಪುರಸಭೆಯ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

ಮಲೇಬೆನ್ನೂರು ಪುರಸಭೆ ನಿರ್ಲಕ್ಷ್ಯ: ಗೌಸ್ ನಗರ, ಟಿಪ್ಪು ನಗರದಲ್ಲಿ ರಸ್ತೆ ಪಾಲಾಗುತ್ತಿದೆ ಕುಡಿಯುವ ನೀರು!
ಮಳೆಬೆನ್ನೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಗೌಸ್ ನಗರ ಮತ್ತು ಟಿಪ್ಪು ನಗರದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು, ಕಳೆದ ಹಲವು ದಿನಗಳಿಂದ ಶುದ್ಧ ಕುಡಿಯುವ ನೀರು ರಸ್ತೆಯ ಮೇಲೆ ಹರಿಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪುರಸಭೆಯ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.
ಒಂದು ಕಡೆ ತಾಲೂಕಿನಾದ್ಯಂತ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಇಲ್ಲಿ ಸಾವಿರಾರು ಲೀಟರ್ ಶುದ್ಧ ನೀರು ರಸ್ತೆ ಪಾಲಾಗಿ ವೃಥಾ ಪೋಲಾಗುತ್ತಿದೆ. ನೀರಿನ ತೀವ್ರ ಸೋರಿಕೆಯಿಂದಾಗಿ ಇಡೀ ರಸ್ತೆ ತುಂಬಾ ನೀರು ನಿಂತು ಕೆಸರುಮಯವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡದಂತಹ ದುಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳ ಕಣ್ಣಿದ್ದೂ ಕುರುಡು:
ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯ ನಿವಾಸಿಗಳು ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಹಾಗೂ ನೀರು ಸರಬರಾಜು ಕಾಮಗಾರಿ ಉಸ್ತುವಾರಿ ಇಂಜಿನಿಯರ್ ರಾಘವೇಂದ್ರ ಅವರಿಗೆ ಹಲವು ಬಾರಿ ಖುದ್ದಾಗಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ದೂರು ಪಡೆದೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಪೈಪ್ ಲೈನ್ ದುರಸ್ತಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿರುವುದು ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಮೇಲಾಧಿಕಾರಿಗಳಿಗೆ ದೂರಿನ ಎಚ್ಚರಿಕೆ:
“ಸಾರ್ವಜನಿಕರ ತೆರಿಗೆ ಹಣದಲ್ಲಿ ಸರಬರಾಜಾಗುವ ಶುದ್ಧ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿದ್ದರೂ ಇಂಜಿನಿಯರ್ ಹಾಗೂ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ತಕ್ಷಣವೇ ಸಂಬಂಧಪಟ್ಟ ಇಂಜಿನಿಯರ್ ರಾಘವೇಂದ್ರ ಹಾಗೂ ಮುಖ್ಯಾಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪೈಪ್‌ಲೈನ್ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು ಹಾಗೂ ನಗರಾಭಿವೃದ್ಧಿ ಕೋಶದ ಉನ್ನತ ಅಧಿಕಾರಿಗಳಿಗೆ ಲಿಖಿತ ದೂರು ನೀಡಿ ಪ್ರತಿಭಟನೆ ನಡೆಸಲಾಗುವುದು,” ಎಂದು ಗೌಸ್ ನಗರ ಮತ್ತು ಟಿಪ್ಪು ನಗರದ ನಾಗರಿಕರು ಎಚ್ಚರಿಸಿದ್ದಾರೆ.