ಮಲೆಬೆನ್ನೂರು ಪುರಸಭೆಯಿಂದ “ಸ್ವಚ್ಛ ಪಾಠ ಶಾಲೆ” ಜಾಗೃತಿ ಅಭಿಯಾನ.
ಶ್ರೀ ರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ "ಸ್ವಚ್ಛತೆಯೇ ಸೇವೆ - 2026" ಕಾರ್ಯಕ್ರಮ

ಮಲೆಬೆನ್ನೂರು ಪುರಸಭೆಯಿಂದ “ಸ್ವಚ್ಛ ಪಾಠ ಶಾಲೆ” ಜಾಗೃತಿ ಅಭಿಯಾನ.
ಮಲೆಬೇನ್ನೂರು:ಶ್ರೀ ರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ “ಸ್ವಚ್ಛತೆಯೇ ಸೇವೆ – 2026” ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಕಸ ವಿಂಗಡಣೆ ಹಾಗೂ ನೈರ್ಮಲ್ಯದ ಕುರಿತು ಮಾಹಿತಿ
ಮಲೆಬೆನ್ನೂರು, ಸೆ. 18: “ಸ್ವಚ್ಛತಾ ಹೀ ಸೇವಾ – 2026” ಅಭಿಯಾನದ ಅಂಗವಾಗಿ, “ಸ್ವಚ್ಛತೆಯಲ್ಲಿ ಸಹಭಾಗಿತ್ವ – ಸ್ವಚ್ಛ ಭಾರತ, ವಿಕಸಿತ ಭಾರತ” ಎಂಬ ಶೀರ್ಷಿಕೆಯಡಿ ಮಲೆಬೆನ್ನೂರು ಪುರಸಭೆ ವತಿಯಿಂದ ನಗರದ ಶ್ರೀ ರಂಗನಾಥಸ್ವಾಮಿ ಸಮಗ್ರ ಶಿಕ್ಷಣ ಪ್ರೌಢಶಾಲೆಯಲ್ಲಿ “ಸ್ವಚ್ಛ ಪಾಠ ಶಾಲೆ” ಅಡಿಯಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರಿಗೆ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಆರೋಗ್ಯ ಅಧಿಕಾರಿಗಳು, “ದೈನಂದಿನ ಜೀವನದಲ್ಲಿ ಸ್ವಚ್ಛತೆ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ನಾಲ್ಕು ವಿಧದ ಕಸ ವಿಂಗಡಣೆಗೆ ಮನವರಿಕೆ:
ಮುಖ್ಯವಾಗಿ ಸಾರ್ವಜನಿಕರು ಕಸವನ್ನು ಮನೆಯಲ್ಲೇ ಮೂಲದಲ್ಲೇ ವಿಂಗಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರಮುಖವಾಗಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಕಾಳಜಿ ತ್ಯಾಜ್ಯ ಎಂದು ನಾಲ್ಕು ಭಾಗಗಳಾಗಿ ಪ್ರತ್ಯೇಕಿಸಿ, ಪುರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ಸ್ವಚ್ಛತೆಯೇ ಸೇವೆ… ಸ್ವಚ್ಛತೆಯೇ ನಮ್ಮೆಲ್ಲರ ಜವಾಬ್ದಾರಿ!” ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ವರದಿ ತೌಫೀಕವುಲ್ಲ ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು