ಸ್ವಾರ್ಥವಿಲ್ಲದ ನಿಷ್ಕಲ್ಮಶ ಸ್ನೇಹವೇ ಜೀವನದ ದೊಡ್ಡ ಆಸ್ತಿ: ಪೂಜ್ಯ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ.
25 ವರ್ಷಗಳ ಬಳಿಕ ಮರಳಿ ಬಾಲ್ಯದ ದಿನಗಳಿಗೆ ತಲುಪಿದ ಅನುಭವ: ಅಥಣಿಯಲ್ಲಿ ಹಳೆಯ ವಿದ್ಯಾರ್ಥಿಗಳ ಭಾವನಾತ್ಮಕ ಪುನರ್ಮಿಲನ

ಸ್ವಾರ್ಥವಿಲ್ಲದ ನಿಷ್ಕಲ್ಮಶ ಸ್ನೇಹವೇ ಜೀವನದ ದೊಡ್ಡ ಆಸ್ತಿ: ಪೂಜ್ಯ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ.
ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ ಅಥಣಿ: ಇಲ್ಲಿನ ಪಟ್ಟದ ಮರುಳಶಂಕರ ದೇವರು ಕನ್ನಡ ಮಾಧ್ಯಮ ಶಾಲೆಯ 1997-2007ರ ಸಾಲಿನ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ ‘ಅಕ್ಷರದ ನೆನಪು’ ಗುರುವಂದನಾ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ಭಾವನಾತ್ಮಕವಾಗಿ ನೆರವೇರಿತು.
ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಮರುಳಸಿದ್ದ ಸ್ವಾಮೀಜಿಯವರು ಆಶೀರ್ವಚನ ನೀಡಿ, “ಗುರು ಎಂದರೆ ಅಜ್ಞಾನದ ಕತ್ತಲೆಯನ್ನು ದೂರಮಾಡಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮಾರ್ಗದರ್ಶಕ. ಜೀವನದಲ್ಲಿ ನಮಗೆ ಸಿಗುವ ದೊಡ್ಡ ಆಸ್ತಿ ಎಂದರೆ ಅದು ಒಳ್ಳೆಯ ಸ್ನೇಹಿತರು. ಸ್ವಾರ್ಥವಿಲ್ಲದ ನಿಷ್ಕಲ್ಮಶ ಸ್ನೇಹವು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕಾಲ ಎಷ್ಟೇ ಉರುಳಿದರೂ, ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಬಾಲ್ಯದ ಸ್ನೇಹವನ್ನು ಹೀಗೆಯೇ ಉಳಿಸಿಕೊಂಡು ಹೋಗಿ,” ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಡಳಿತ ಮಂಡಳಿ ನಿರ್ದೇಶಕ ರಾಮನಗೌಡ ಪಾಟೀಲ ಮಾತನಾಡಿ, ಕೌಟುಂಬಿಕ ಜವಾಬ್ದಾರಿಗಳ ನಡುವೆಯೂ ಗುರುಗಳಿಗೆ ಗೌರವ ಸಲ್ಲಿಸಲು ಆಗಮಿಸಿದ ವಿದ್ಯಾರ್ಥಿನಿಯರ ನಿಷ್ಠೆ ಮತ್ತು ಸಮಯಪ್ರಜ್ಞೆಯನ್ನು ಶ್ಲಾಘಿಸಿದರು. ಇದೇ ವೇಳೆ ಸೆಪ್ಟೆಂಬರ್ 27ರ ‘ಮಗಳ ದಿನಾಚರಣೆ’ಯನ್ನು ಸ್ಮರಿಸಿದ ಅವರು, ಗುರು ಕೇವಲ ಅಕ್ಷರ ಕಲಿಸುವ ವ್ಯಕ್ತಿಯಲ್ಲ, ಆತ ನಮ್ಮ ಬದುಕಿಗೆ ಆಕಾರ ಕೊಡುವ ಶಿಲ್ಪಿ ಎಂದು ಅಭಿಪ್ರಾಯಪಟ್ಟರು.
ಹಳೆಯ ವಿದ್ಯಾರ್ಥಿ ಶಿವಾನಂದ ಮಾತನಾಡಿ, “ವೃತ್ತಿ, ಸಂಸಾರದ ಜವಾಬ್ದಾರಿಗಳ ನಡುವೆ ಬ್ಯುಸಿಯಾಗಿದ್ದ ನಾವೆಲ್ಲರೂ ಇಂದು ಮತ್ತೆ ಶಾಲಾ ದಿನಗಳಿಗೆ ಮರಳಿ ಬಾಲ್ಯದ ಅನುಭವ ಪಡೆದಿದ್ದೇವೆ. ನಮಗೆ ಜೀವನದ ಮೌಲ್ಯಗಳನ್ನು ಧಾರೆ ಎರೆದು ಸಮಾಜದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಿದ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ,” ಎಂದರು.
ಸಮಾರಂಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಡಿ. ಎಸ್. ಗೊಟ್ಟಿ, ಬಸವರಾಜ ಕೋಟಿ, ರವಿ ಪಾಟೀಲ, ಸುರೇಶ ಹೊನ್ನಳ್ಳಿ, ಮುಖ್ಯೋಪಾಧ್ಯಾಯಿನಿ ನಿರ್ಮಲಾ ಚನಗೌಡರ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಹಾಗೂ ನೂರಾರು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಮಹೇಶ್ ಶರ್ಮಾ, ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ