Uncategorized

ದಾವಣಗೆರೆಯಲ್ಲಿ ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚನೆ

ದಾವಣಗೆರೆಯಿಂದ ಹೊನ್ನಾಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮುಂದಿನ 15 ದಿನಗಳಲ್ಲಿ ರಸ್ತೆ ದುರಸ್ತಿ ಅಥವಾ ಹೊಸದಾಗಿ ರಸ್ತೆ ನಿರ್ಮಾಣ ಮಾಡಲು ಕ್ರಮವಹಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಗಡುವು ನೀಡಿದರು

ದಾವಣಗೆರೆಯಲ್ಲಿ ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚನೆ
ವಿಜಯ್ ಪ್ರಭಾಸ್ ನ್ಯೂಸ್ ದಾವಣಗೆರೆ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ಹಾಗೂ ಸುಗಮ ವಾಹನ ಸಂಚಾರಕ್ಕೆ ಸೂಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ (PWD) ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶೀಘ್ರ ಅನುಷ್ಠಾನ, ಸಂಚಾರ ಅಡೆತಡೆಗಳ ನಿವಾರಣೆ ಹಾಗೂ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
೧೫ ದಿನಗಳಲ್ಲಿ ರಸ್ತೆ ದುರಸ್ತಿಗೆ ಗಡುವು:
ದಾವಣಗೆರೆಯಿಂದ ಹೊನ್ನಾಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮುಂದಿನ 15 ದಿನಗಳಲ್ಲಿ ರಸ್ತೆ ದುರಸ್ತಿ ಅಥವಾ ಹೊಸದಾಗಿ ರಸ್ತೆ ನಿರ್ಮಾಣ ಮಾಡಲು ಕ್ರಮವಹಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಗಡುವು ನೀಡಿದರು.
ಹೆದ್ದಾರಿ (NH-48) ಕಾಮಗಾರಿಗಳ ಪರಿಶೀಲನೆ:
ಎಸ್‌ಎಸ್‌ ಆಸ್ಪತ್ರೆ ಅಂಡರ್‌ಪಾಸ್ ವಿಸ್ತರಣೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್‌ಎಸ್‌ ಹೈಟೆಕ್ ಆಸ್ಪತ್ರೆಯ ಮುಖ್ಯ ದ್ವಾರದ ಬಳಿ ಇರುವ ಅಂಡರ್‌ಪಾಸ್‌ನಲ್ಲಿ ವಾಹನ ದಟ್ಟಣೆ ಹಾಗೂ ಆಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಕೆಎಸ್‍ಆರ್‌ಟಿಸಿ ಡಿಪೋ ಕೂಡ ಇಲ್ಲೇ ಇರುವುದರಿಂದ ಈ ಸೇತುವೆಯನ್ನು ವಿಸ್ತರಿಸಲು ಎನ್‌ಎಚ್‌ಎಐ ಕ್ರಮವಹಿಸಬೇಕು ಎಂದು ತಿಳಿಸಿದರು.
ಹೊಸ ಕುಂದವಾಡ ಅಂಡರ್‌ಪಾಸ್: ಹೊಸ ಕುಂದವಾಡ ಗ್ರಾಮದ ಬಳಿಯ ಅಂಡರ್‌ಪಾಸ್ ಸೇತುವೆ ಹಾಗೂ ಎರಡೂ ಬದಿಯ ಸರ್ವಿಸ್ ರಸ್ತೆ ಕಾಮಗಾರಿಯನ್ನು ಡಿಸೆಂಬರ್‌ ಮಾಹೆಯೊಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು.
ಅಪಾಯಕಾರಿ ವಲಯಗಳ ದುರಸ್ತಿ: ಹರಿಹರ ತಾಲೂಕು ಹರಗನಹಳ್ಳಿ ಗ್ರಾಮದ ಬಳಿಯ ಅಂಡರ್‌ಪಾಸ್ ಬಾಟಲ್ ನೆಕ್ ಮಾದರಿಯಲ್ಲಿದ್ದು, ರಾತ್ರಿ ವೇಳೆ ಅಪಘಾತ ವಲಯವಾಗಿದೆ. ಅದನ್ನು ತಕ್ಷಣ ಅಗಲಗೊಳಿಸಬೇಕು. ಆನಗೋಡು ಗ್ರಾಮದ ಬಳಿ ಹೆದ್ದಾರಿಗೆ ವಾಹನಗಳು ಏಕಾಏಕಿ ತಿರುವು ಪಡೆಯುವುದನ್ನು ತಡೆಯಲು ಸಂಪೂರ್ಣವಾಗಿ ಗ್ರಿಲ್ ಅಳವಡಿಸಬೇಕು ಎಂದರು.
ಟೋಲ್‌ಗೇಟ್‌ನಲ್ಲಿ ಕಣ್ಣಗಾವಲು, ಆಟೋಗಳಿಗೆ ಮೀಟರ್ ಕಡ್ಡಾಯ:

ಹೆಬ್ಬಾಳು ಟೋಲ್‌ಗೇಟ್‌ನಲ್ಲಿ ಎಎನ್‌ಪಿಆರ್ (ANPR) ನಂಬರ್ ಪ್ಲೇಟ್ ನೋಂದಣಿ ಕ್ಯಾಮೆರಾ, ಪಿಟಿಝೆಡ್ (PTZ) ಕ್ಯಾಮೆರಾ, ದೀಪಗಳ ವ್ಯವಸ್ಥೆ ಹಾಗೂ ದ್ವಿಚಕ್ರವಾಹನ ಮಾರ್ಗದಲ್ಲಿ ಸಿಸಿಟಿವಿ ಅಳವಡಿಸಿ ಜಿಲ್ಲಾಡಳಿತದ ಕಣ್ಣಗಾವಲಿನಲ್ಲಿರಿಸಬೇಕು. ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವುದು ಹಾಗೂ ಚಾಲಕನ ವಿವರ ಹೊಂದಿರುವ ಮಾಹಿತಿ ಫಲಕ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲು ಸೂಚಿಸಿದರು. ವಾಣಿಜ್ಯ ಸಂಕೀರ್ಣಗಳ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲು ಜಂಟಿ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದರು.
ಉಚಿತ ತುರ್ತು ಚಿಕಿತ್ಸೆಗೆ ಆದೇಶ:
ರಸ್ತೆ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ‘ಗೋಲ್ಡನ್ ಅವರ್’ ಅವಧಿಯಲ್ಲಿ ತಕ್ಷಣದ ಉಚಿತ ತುರ್ತು ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ. ‘ಪಿಎಂ ರಹಾತ್’ ಯೋಜನೆಯಡಿ ನಿಗದಿತ ಆಸ್ಪತ್ರೆಗಳಲ್ಲಿ ಗರಿಷ್ಠ ರೂ. 1.50 ಲಕ್ಷದವರೆಗೆ ಉಚಿತ ಚಿಕಿತ್ಸೆಗೆ ಅವಕಾಶವಿದ್ದು, ಆಸ್ಪತ್ರೆಗಳು ವಿಳಂಬವಿಲ್ಲದೆ ಅರ್ಜಿ ಅನುಮೋದಿಸಬೇಕು. ಈ ಕುರಿತು ಅರಿವು ಮೂಡಿಸಲು ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆಯಲು ಸೂಚಿಸಿದರು.
ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ 17ಕ್ಕೆ ಇಳಿಕೆ: ಎಸ್‌ಪಿ ಡಾ.ಶೇಖರ್‌ ಹೆಚ್.ಟಿ
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶೇಖರ್‌ ಹೆಚ್.ಟಿ ಅವರು, ಜಿಲ್ಲೆಯಲ್ಲಿದ್ದ 32 ಬ್ಲಾಕ್‌ ಸ್ಪಾಟ್‌ಗಳಲ್ಲಿ (ಅಪಘಾತ ವಲಯ) ಸಮರ್ಪಕ ಸೂಚನಾ ಫಲಕ ಹಾಗೂ ರಸ್ತೆ ದುರಸ್ತಿ ಮಾಡಿಸಿ ಈಗ ಬಾಕಿ ಸಂಖ್ಯೆಯನ್ನು 17ಕ್ಕೆ ಇಳಿಸಲಾಗಿದೆ ಎಂದರು. ಹೆದ್ದಾರಿ ಕಾಮಗಾರಿ ನಡೆಯುವ ಭಾಗಗಳಲ್ಲಿ ಕಡ್ಡಾಯವಾಗಿ ಬ್ಯಾರಿಕೇಡ್‌ಗಳು, ರಿಫ್ಲೆಕ್ಟರ್‌ಗಳು ಹಾಗೂ ಬ್ಲಿಂಕರ್ ಲೈಟ್‌ಗಳನ್ನು ಅಳವಡಿಸಬೇಕು. ನಗರದ ಸಿಸಿಟಿವಿ ಕ್ಯಾಮೆರಾಗಳನ್ನು ತಕ್ಷಣವೇ ಕಮಾಂಡ್ ಸೆಂಟರ್‌ಗೆ ಲಿಂಕ್ ಮಾಡಬೇಕು. ಅರನಹಳ್ಳಿ ಸೇತುವೆ ಹಾಗೂ ಜಗಳೂರು-ಹರಿಹರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 369 ರ ಅಪಾಯಕಾರಿ ತಿರುವುಗಳಲ್ಲಿ ತಕ್ಷಣವೇ ತಾತ್ಕಾಲಿಕ ತಡೆಗೋಡೆ ಹಾಗೂ ರಸ್ತೆ ಸುರಕ್ಷತಾ ಮಾರ್ಪಾಡುಗಳನ್ನು ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್‌, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮುರಳಿಧರ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!