ಚಿಕ್ಕೋಡಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಉಪ ಲೋಕಾಯುಕ್ತರ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ
ದಾಖಲೆ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ:

ಚಿಕ್ಕೋಡಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಉಪ ಲೋಕಾಯುಕ್ತರ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ
ವಿಜಯ್ ಪ್ರಭಾಸ್ ನ್ಯೂಸ್ ಚಿಕ್ಕೋಡಿ: ಸ್ಥಳೀಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯ ದಾಖಲೆಗಳ ನಿರ್ವಹಣೆಯಲ್ಲಿನ ಲೋಪದೋಷಗಳು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿತನವನ್ನು ಕಂಡು ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ಹಾಜರಾತಿ ವಹಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಬಾರದೇ ಇರುವುದು ಮತ್ತು ಬರುವ ಮುನ್ನವೇ ಸಹಿ ಹಾಕಿ ಗೈರಾಗಿರುವುದನ್ನು ಗಮನಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತದನಂತರ ಔಷಧ ಉಗ್ರಾಣಕ್ಕೆ ಭೇಟಿ ನೀಡಿ, ಉಗ್ರಾಣದ ಸ್ವಚ್ಛತೆ ಹಾಗೂ ಅಚ್ಚುಕಟ್ಟಾದ ನಿರ್ವಹಣೆ ಕುರಿತು ಅಲ್ಲಿದ್ದ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ದಾಖಲೆ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ:
ಹೆರಿಗೆ ವಿಭಾಗದ ವಿವಿಧ ಕಡತಗಳನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು, ದಾಖಲೆಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯವನ್ನು ಪತ್ತೆಹಚ್ಚಿದರು. ಇನ್ಮುಂದೆ ಹೆರಿಗೆಗೆ ದಾಖಲಾಗುವ ಗರ್ಭಿಣಿಯರ ತಾಯಿ ಕಾರ್ಡ್, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಪಡೆದು ರಿಜಿಸ್ಟರ್ನಲ್ಲಿ ನಮೂದಿಸಬೇಕು ಎಂದು ಆದೇಶಿಸಿದರು. ಅಲ್ಲದೆ, ಹೆರಿಗೆ ವಿಭಾಗದಲ್ಲಿ ದಾಖಲಾಗಿರುವ ಬಾಣಂತಿಯರೊಂದಿಗೆ ಸಮಾಲೋಚನೆ ನಡೆಸಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ಮಾಹಿತಿ ಪಡೆದರು.
ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗೆ ಕಳುಹಿಸುವುದಕ್ಕೆ ಕಳವಳ:
ಸರ್ಕಾರಿ ಆಸ್ಪತ್ರೆಯಲ್ಲೇ ಸೌಲಭ್ಯಗಳಿದ್ದರೂ ಗರ್ಭಿಣಿಯರನ್ನು ವಿವಿಧ ತಪಾಸಣೆ ಮತ್ತು ಸ್ಕ್ಯಾನಿಂಗ್ಗಾಗಿ ಖಾಸಗಿ ಆಸ್ಪತ್ರೆ ಹಾಗೂ ಸೆಂಟರ್ಗಳಿಗೆ ಕಳುಹಿಸುತ್ತಿರುವುದಕ್ಕೆ ನ್ಯಾ. ವೀರಪ್ಪ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದೇ ಇಂತಹ ಅವ್ಯವಸ್ಥೆಗೆ ಕಾರಣ ಎಂದು ತರಾಟೆಗೆ ತೆಗೆದುಕೊಂಡರು. ಗರ್ಭಿಣಿಯರಿಗೆ ಆಸ್ಪತ್ರೆಗೆ ಬರಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಅಗತ್ಯ ಬಿದ್ದಲ್ಲಿ ಮುಖ್ಯ ರಸ್ತೆಯಿಂದ ಆಸ್ಪತ್ರೆಯವರೆಗೆ ಕರೆತರಲು ಅಂಬ್ಯುಲೆನ್ಸ್ಗಳನ್ನು ಬಳಸಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಶಸ್ತ್ರಚಿಕಿತ್ಸಾ ವಿಭಾಗದ ಅವ್ಯವಸ್ಥೆಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರಿ ಆಸ್ಪತ್ರೆಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಅರವಿಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಶಶಿಕುಮಾರ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ್, ತಹಶೀಲ್ದಾರ್ ಆರ್.ಆರ್. ಬುರ್ಲಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಗಡಾದ ಉಪಸ್ಥಿತರಿದ್ದರು.