Uncategorized

ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಶಾಂತಿ ಸಭೆ: ಸೌಹಾರ್ದಯುತ ಆಚರಣೆಗೆ ಕರೆ

ಕಾನೂನು ಸುವ್ಯವಸ್ಥೆ ಪಾಲನೆಗೆ ಸೂಚನೆ

ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಶಾಂತಿ ಸಭೆ: ಸೌಹಾರ್ದಯುತ ಆಚರಣೆಗೆ ಕರೆ
ಮಲೇಬೆನ್ನೂರು: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಂದು ಮುಂಬರುವ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಊರಿನ ಮುಖಂಡರು, ಪುರಸಭೆ ಸದಸ್ಯರು, ಜಾಮಿಯಾ ಮಸೀದಿ ಕಮಿಟಿ ಪದಾಧಿಕಾರಿಗಳು, ಪಟ್ಟಣದ ಎಲ್ಲಾ ಮಸೀದಿಗಳ ಮುತವಲ್ಲಿಗಳು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದ್ದರು.
ಭಾವೈಕ್ಯತೆಯ ಸಂದೇಶ
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಿಎಸ್ಐ ಹಾರೂನ್ ಅಖ್ತರ್ ಅವರು ಹಬ್ಬದ ಸಿದ್ಧತೆಗಳ ಕುರಿತು ಊರಿನ ಪ್ರಮುಖರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಮುಖಂಡರಾದ ಯೂಸುಫ್ ಖಾನ್ ಮತ್ತು ನಯಾಜ್ ಮಾತನಾಡಿ, “ಪ್ರತಿ ವರ್ಷದಂತೆ ಈ ವರ್ಷವೂ ಸಹ ಎಲ್ಲಾ ಧರ್ಮದವರ ಸಹಕಾರದೊಂದಿಗೆ ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಲಾಗುವುದು,” ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಪುರಸಭೆ ಸ್ಥಾಯಿ ಸಮಿತಿ ಸದಸ್ಯರಾದ ಶಿವು ಅವರು, “ನಮ್ಮ ಪಟ್ಟಣದಲ್ಲಿ ಎಲ್ಲಾ ಧರ್ಮದವರು ಅಳಿಯ-ಮಾವಂದಿರಂತೆ ಅತ್ಯಂತ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಭೇದಭಾವವಿಲ್ಲದೆ ಒಟ್ಟಾಗಿ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿಯೂ ಸೌಹಾರ್ದತೆಯಿಂದ ಹಬ್ಬ ಆಚರಿಸಲಿದ್ದೇವೆ,” ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಾನೂನು ಸುವ್ಯವಸ್ಥೆ ಪಾಲನೆಗೆ ಸೂಚನೆ
ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರಾದ (ಸಿಪಿಐ) ಸುರೇಶ್ ಸಗರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹಬ್ಬದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು. ಹಬ್ಬದ ಪ್ರಯುಕ್ತ ಅಳವಡಿಸುವ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳಿಗೆ ಪುರಸಭೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ಈ ಪ್ರಮುಖ ಸಭೆಗೆ ಪುರಸಭೆಯ ಮುಖ್ಯಾಧಿಕಾರಿಗಳು ಗೈರುಹಾಜರಾಗಿದ್ದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಎಎಸ್‌ಐ ಶ್ರೀನಿವಾಸ್ ಅವರು ನಿರೂಪಣೆ ಮಾಡಿದರು. ವೇದಿಕೆಯಲ್ಲಿ ಪಿಎಸ್ಐ ಶ್ರೀಪತಿ ಗಿನ್ನಿ, ಮುಖಂಡರುಗಳಾದ ಸಾಬೀರ್, ಸುಲ್ತಾನ್ ಅಸಿಫ್ ಎಂ.ಬಿ., ಸಮಿ (ಹಬ್ಬು), ಪಿ.ಎಸ್. ಮೊಹಮ್ಮದ್ ಅಲಿ, ಪುರಸಭೆ ಸದಸ್ಯರಾದ ಶಬ್ಬೀರ್ ಖಾನ್, ದಾದಾಪೀರ್ ಹಾಗೂ ಲೋಕೇಶ್ ಕೆ.ಜಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!