ಮಲೇಬೆನ್ನೂರಿನಲ್ಲಿ ಕುಡಿಯುವ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಅಧಿಕಾರಿಗಳ ಬೇಜವಾಬ್ದಾರಿತನ: ಮಲೇಬೆನ್ನೂರಿನ 14-15ನೇ ವಾರ್ಡ್‌ಗಳಲ್ಲಿ ಒಡೆದ ಪೈಪ್‌ಲೈನ್; ಕಣ್ಣಿದ್ದೂ ಕುರುಡಾದ ಪುರಸಭೆ!
ಮಲೇಬೆನ್ನೂರಿನಲ್ಲಿ ಕುಡಿಯುವ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ವಿಜಯ್ ಪ್ರಭಾಸ್ ನ್ಯೂಸ್ ಮಲೇಬೆನ್ನೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 14 ಮತ್ತು 15 ರಲ್ಲಿ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಒಡೆದು ಕಳೆದ ಹಲವು ದಿನಗಳಿಂದ ಸಾವಿರಾರು ಲೀಟರ್ ಶುದ್ಧ ಕುಡಿಯುವ ನೀರು ವ್ಯರ್ಥವಾಗಿ ಹರಿದು ನೇರವಾಗಿ ಭದ್ರಾ ಚಾನಲ್ ಸೇರುತ್ತಿದೆ. ಅಧಿಕಾರಿಗಳ ಈ ಉದಾಸೀನ ಧೋರಣೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಮಾಧ್ಯಮಗಳಲ್ಲಿ ಹಲವು ಬಾರಿ ಸುದ್ದಿ ಪ್ರಸಾರವಾಗಿದ್ದರೂ ಮತ್ತು ಸ್ಥಳೀಯ ನಾಗರಿಕರು ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಇಂಜಿನಿಯರ್ ಅವರ ಗಮನಕ್ಕೆ ಮೌಖಿಕವಾಗಿ ಹಲವು ಬಾರಿ ತಂದಿದ್ದರೂ ಸಹ, ಇಲ್ಲಿಯವರೆಗೆ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ನಾಗರಿಕರು ಗಂಭೀರವಾಗಿ ಆರೋಪಿಸಿದ್ದಾರೆ.
ಒಂದೆಡೆ ರಾಜ್ಯದ ಹಲವೆಡೆ ಭೀಕರ ಬರಗಾಲದ ಛಾಯೆ ಆವರಿಸಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಗಂಭೀರ ಸಂದರ್ಭದಲ್ಲೂ ಅಧಿಕಾರಿಗಳು ಶುದ್ಧ ಕುಡಿಯುವ ನೀರನ್ನು ಈ ರೀತಿ ಪೋಲು ಮಾಡುತ್ತಿರುವುದು ಅವರ ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ವರದಿ ಮಾಡಿದರೂ ಯಾವುದೇ ಸೂಕ್ತ ಕ್ರಮ ಜರುಗಿಸದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಒಡೆದ ಪೈಪ್‌ಲೈನ್ ದುರಸ್ತಿ ಮಾಡಿ ನೀರು ಪೋಲಾಗುವುದನ್ನು ತಡೆಯಬೇಕು ಎಂದು ನಾಗರಿಕರು ಮಾನ್ಯ ದಾವಣಗೆರೆ ಜಿಲ್ಲಾಧಿಕಾರಿಗಳಲ್ಲಿ ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.
ವರದಿ ತೌಫೀಕ್ ಉಲ್ಲ ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು