ಮಲೇಬೆನ್ನೂರು ಪುರಸಭೆ ಬೇಜವಾಬ್ದಾರಿತನ: ಮಳೆಗಾಲದಲ್ಲೂ ಹನಿ ನೀರಿಗೂ ಪರದಾಡುತ್ತಿರುವ ಸಾರ್ವಜನಿಕರು!
ಮೇಲಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ:

ಮಲೇಬೆನ್ನೂರು ಪುರಸಭೆ ಬೇಜವಾಬ್ದಾರಿತನ: ಮಳೆಗಾಲದಲ್ಲೂ ಹನಿ ನೀರಿಗೂ ಪರದಾಡುತ್ತಿರುವ ಸಾರ್ವಜನಿಕರು!
ವರದಿ ತೌಫೀಕವುಲ್ಲ ಮಲೇಬೆನ್ನೂರು: ಮಲೆನಾಡಿನ ಹೆಬ್ಬಾಗಿಲು ಎಂದು ಪ್ರಸಿದ್ಧಿ ಪಡೆದಿರುವ ಮಲೇಬೆನ್ನೂರು ಪಟ್ಟಣದಲ್ಲಿ ಇನ್ನು ಮಳೆಗಾಲ ಮುಗಿಯುವ ಮುನ್ನವೇ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ಪುರಸಭೆಯ ಅಧಿಕಾರಿಗಳ ಮತ್ತು ಇಂಜಿನಿಯರ್ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಹನಿ ನೀರಿಗೂ ಕಚೇರಿಗೆ ಅಲೆಯುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಟ್ಟಣವು ಈಗಾಗಲೇ ಬರಗಾಲದ ಭೀತಿಯನ್ನು ಎದುರಿಸುತ್ತಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೂ ನಾಗರಿಕರಿಗೆ ಸಮರ್ಪಕ ನೀರು ಪೂರೈಸಬೇಕಾದ ಪುರಸಭೆಯು ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಪುರಸಭೆಯ ಇಂಜಿನಿಯರ್ ರಾಘವೇಂದ್ರ ರವರ ಕರ್ತವ್ಯ ಲೋಪವೇ ನೇರ ಕಾರಣ ಎಂದು ಸಾರ್ವಜನಿಕರು ಬಹಿರಂಗವಾಗಿ ಆಪಾದಿಸುತ್ತಿದ್ದಾರೆ.
ಕಳಪೆ ಮೋಟಾರ್ ಅಳವಡಿಕೆ, ಬಿಲ್ ದಂಧೆಯ ಆರೋಪ:
ಕುಡಿಯುವ ನೀರಿನ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಅಧಿಕಾರಿಗಳು ಗುತ್ತಿಗೆದಾರರ ಹೆಗಲಿಗೆ ಹಾಕಿ ಕೈತೊಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಪಟ್ಟಣದಲ್ಲಿ ಕಳಪೆ ಗುಣಮಟ್ಟದ ಮೋಟಾರ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಮೋಟಾರ್‌ಗಳು ಪದೇ ಪದೇ ದುರಸ್ತಿಗೆ ಬರುತ್ತಿದ್ದು, ಅದನ್ನೇ ನೆಪವಾಗಿಸಿಕೊಂಡು ಇಂಜಿನಿಯರ್ ರಾಘವೇಂದ್ರ ರವರು ಪದೇ ಪದೇ ದುರಸ್ತಿ ಕಾಮಗಾರಿ ನಡೆಸಿ ಲಕ್ಷಾಂತರ ರೂಪಾಯಿ ಬಿಲ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿ ಮತ್ತು ಗುತ್ತಿಗೆದಾರರ ಈ ಶಾಮೀಲಾತಿಯಿಂದಾಗಿ ಪಟ್ಟಣದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಯಾಗಿದೆ.
ಮೇಲಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ:
ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯ ಸಿಗದೆ ಸಾರ್ವಜನಿಕರು ಪ್ರತಿದಿನ ಪುರಸಭೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಈ ಹಗರಣ ಮತ್ತು ನಿರ್ಲಕ್ಷ್ಯದ ಬಗ್ಗೆ ಗೊತ್ತಿದ್ದರೂ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ಈ ಮೌನವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ:
“ಮಳೆಗಾಲದಲ್ಲೇ ನಮಗೆ ನೀರು ಸಿಗುತ್ತಿಲ್ಲ ಎಂದರೆ ಇನ್ನು ಬೇಸಿಗೆಯ ಪರಿಸ್ಥಿತಿ ಏನಾಗಬೇಡ? ಅಧಿಕಾರಿಗಳ ಬಿಲ್ ದಂಧೆಗೆ ಸಾರ್ವಜನಿಕರು ಬಲಿಯಾಗಬೇಕೇ?” ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕರ್ತವ್ಯ ಲೋಪ ಎಸಗಿರುವ ಇಂಜಿನಿಯರ್ ರಾಘವೇಂದ್ರ ಮತ್ತು ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಪಟ್ಟಣಕ್ಕೆ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಲಿಖಿತ ಮನವಿಯ ಮೂಲಕ ಗಡುವು ನೀಡಿದ್ದಾರೆ.