Uncategorized

ಅಥಣಿಯಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ: ತುರ್ತು ಬರ ಪರಿಹಾರ ಹಾಗೂ ರೈತರ ಸಾಲ ಮನ್ನಾಕ್ಕೆ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್ ಆಗ್ರಹ

ಸಾಲ ಹಾಗೂ ಕಂದಾಯ ಮನ್ನಾ: ಬರಗಾಲದ ಹಿನ್ನೆಲೆಯಲ್ಲಿ ರೈತರ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಕೃಷಿ ಸಾಲ ಹಾಗೂ ಭೂಕಂದಾಯವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಆಗ್ರಹಿಸಲಾಯಿತು.

ಅಥಣಿಯಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ: ತುರ್ತು ಬರ ಪರಿಹಾರ ಹಾಗೂ ರೈತರ ಸಾಲ ಮನ್ನಾಕ್ಕೆ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್ ಆಗ್ರಹ
ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ ಅಥಣಿ: ರಾಜ್ಯ ಸರ್ಕಾರದ ಗಂಭೀರ ನಿರ್ಲಕ್ಷ್ಯದಿಂದಾಗಿ ಅಥಣಿ ತಾಲೂಕಿನಾದ್ಯಂತ ಭೀಕರ ಬರಗಾಲ ತಲೆದೂರಿದ್ದು, ರೈತರು ಮತ್ತು ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ಮಾಜಿ ಶಾಸಕ ಶ್ರೀ ಶಹಜಾನ್ ಡೊಂಗರಗಾಂವ್ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ತಾಲೂಕಿನ ಸಿದ್ದೇಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಾರ್ಯಾಲಯದವರೆಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್, “ಅಥಣಿ ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಕೃಷಿ ಬೇಸಾಯ ಸಂಪೂರ್ಣ ಹಾನಿಗೊಂಡಿದೆ. ಭೂಗರ್ಭ ಜಲ ಕುಸಿತದಿಂದಾಗಿ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ತೀವ್ರ ಕೊರತೆ ಎದುರಾಗಿದೆ. ಗ್ರಾಮೀಣ ಭಾಗದ ಜನ ಜೀವನೋಪಾಯಕ್ಕಾಗಿ ನೆರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಕೇವಲ ಸಾಮಾನ್ಯ ಬರಗಾಲವಾಗಿರದೆ, ಗ್ರಾಮೀಣ ಜನರ ಬದುಕನ್ನು ನುಂಗುತ್ತಿರುವ ಸುನಾಮಿಯಂತಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯ ಪ್ರಮುಖ ಬೇಡಿಕೆಗಳು:
ತುರ್ತು ಬರ ಪರಿಹಾರ: ಗ್ರಾಮವಾರು ವೈಜ್ಞಾನಿಕ ಸಮೀಕ್ಷೆ ನಡೆಸಿ, ಬಿತ್ತನೆ ವೈಫಲ್ಯ ಹಾಗೂ ಬೆಳೆ ಹಾನಿಗೆ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ತಕ್ಷಣವೇ ಆರ್ಥಿಕ ನೆರವು ನೀಡಬೇಕು ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು.
ರೈತರ ಸಾಲ ಮನ್ನಾ: ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ ಕೃಷಿ ಸಾಲವನ್ನು ತಕ್ಷಣವೇ ಮನ್ನಾ ಮಾಡಬೇಕು ಮತ್ತು ಭೂಕಂದಾಯವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. (2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ₹24,000 ಕೋಟಿ ಸಾಲ ಮನ್ನಾ ಮಾಡಿ ಪ್ರತಿ ರೈತನಿಗೆ ₹2 ಲಕ್ಷದವರೆಗೆ ನೆರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು).
ಕಬ್ಬಿಗೆ ₹5,500 ಬೆಲೆ: ಈ ಬಾರಿ ಬೆಳೆದ ಕಬ್ಬಿಗೆ ಪ್ರತಿ ಟನ್ನಿಗೆ ₹5,500 ಬೆಲೆ ನಿಗದಿಪಡಿಸಬೇಕು.
ನಿರಂತರ ವಿದ್ಯುತ್ ಪೂರೈಕೆ: ಕೃಷಿ ಪಂಪ್‌ಸೆಟ್‌ಗಳಿಗೆ ಯಾವುದೇ ಲೋಡ್ ಶೆಡ್ಡಿಂಗ್ ಮಾಡದೆ ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡಬೇಕು.
ಬರಿಗಾಲಿನಲ್ಲಿ ನಡೆದು ಗಮನ ಸೆಳೆದ ಕಾರ್ಯಕರ್ತ:
ಪ್ರತಿಭಟನೆಯಲ್ಲಿ ಜೆಡಿಎಸ್ ಕಾರ್ಯಕರ್ತ ಅರುಣ್ ಹಟ್ಟಿ ಅವರು ಸಿದ್ದೇಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಪಾದರಕ್ಷೆಗಳಿಲ್ಲದೆ ಬರಿಗಾಲಿನಲ್ಲಿ ಹೆಜ್ಜೆ ಹಾಕುವ ಮೂಲಕ ಬರಗಾಲದ ತೀವ್ರತೆಯನ್ನು ವಿಶಿಷ್ಟವಾಗಿ ಬಿಂಬಿಸಿ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಚಿಕ್ಕೋಡಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಲ್ಲಪ್ಪಣ್ಣ ಮಗೆನ್ನವರ್, “ನನ್ನದೂ ಕೂಡ ಒಂದು ಸಕ್ಕರೆ ಕಾರ್ಖಾನೆ ಇದ್ದು, ಸರ್ಕಾರ ಕಬ್ಬಿಗೆ ₹5,500 ಬೆಂಬಲ ಬೆಲೆ ಘೋಷಣೆ ಮಾಡಿದರೆ ಆ ಬೆಲೆಯನ್ನು ರೈತರಿಗೆ ನೀಡಲು ನಾನು ಸಿದ್ಧನಿದ್ದೇನೆ” ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಉಗ್ರ ಹೋರಾಟದ ಎಚ್ಚರಿಕೆ:
ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಅಥಣಿ ತಾಲೂಕಿನಲ್ಲಿ ತುರ್ತು ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಜೆಡಿಎಸ್ ವತಿಯಿಂದ ತೀವ್ರ ಸ್ವರೂಪದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡೊಂಗರಗಾಂವ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ದುಂಡಪ್ಪ ನಿಂಗನೂರ್, ಪ್ರಮುಖರಾದ ಶಬ್ಬೀರ್ ಗೌಡ ಪಾಟೀಲ್, ಮುತ್ತಣ್ಣ ಸಂತಿ, ರಾಜು ಡೌರಿ, ಜಕ್ಕಪ್ಪಣ್ಣ ದರಿಗೌಡರ್, ಮುಡಿಸಿ ಕಾಕಾ, ವಿದ್ಯಾಧರ್ ನಾಡಗೌಡ, ಮಹಾಂತೇಶ ಅವಟಿ, ಮಲ್ಲಿಕಾರ್ಜುನ್ ಗುಂಜಿಗಾವಿ, ರೈತ ಮುಖಂಡರಾದ ಹಳ್ಳೂರ್, ಅಸಕರಲ್ಲಿ ಡೊಂಗರಗಾಂವ್, ಇಂತಿಯಾಗಿ ಹಿಪ್ಪರಗಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ.

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!