ದಾವಣಗೆರೆಯಲ್ಲಿ ಲೆಕ್ಕಾಚಾರ ಉಲ್ಟಾ-ಪಲ್ಟಾ! ಶಾಮನೂರ ಫ್ಯಾಮಿಲಿ ಪಾಲಾಗುತ್ತಾ ‘ವಿಜಯ’?
ದಾವಣಗೆರೆ (Davangere) ಲೆಕ್ಕಾಚಾರ ಮತ್ತೆ ಉಲ್ಟಾ ಆಗ್ತಿದ್ದು, ಫಲಿತಾಂಶವು ಭಾರೀ ನಿರೀಕ್ಷೆ ಹೆಚ್ಚಿಸಿದೆ.

ದಾವಣಗೆರೆ (ಮೇ.04): ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ (Davangere By Election) ಮತ ಎಣಿಕೆ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಕೊಡ್ತಿದೆ. ಆರಂಭದ ಮತ ಎಣಿಕೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು (Samarth Shamanuru) 8ನೇ ಸುತ್ತಿನ ಅಂತ್ಯಕ್ಕೆ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ದಾವಣಗೆರೆ (Davangere) ಲೆಕ್ಕಾಚಾರ ಮತ್ತೆ ಉಲ್ಟಾ ಆಗ್ತಿದ್ದು, ಫಲಿತಾಂಶವು ಭಾರೀ ನಿರೀಕ್ಷೆ ಹೆಚ್ಚಿಸಿದೆ.
ಸಮರ್ಥ ಶಾಮನೂರುಗೆ ಮುನ್ನಡೆ
ಮತದಾನ ಆರಂಭಗೊಂಡ ಮೊದಲ 6 ಸುತ್ತಿನಲ್ಲಿಯೂ ಸಮರ್ಥ್ ಶಾಮನೂರು ಹಿನ್ನಡೆ ಸಾಧಿಸಿದ್ರು. 7ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆಯಲ್ಲಿದ್ದರು. ಆದ್ರೆ 8 ಹಾಗೂ 9 ನೇ ಸುತ್ತಿನಲ್ಲಿ ಅಂಕಿ-ಸಂಖ್ಯೆ ಉಲ್ಟಾ ಆಗಿದೆ. ಸದ್ಯ 14 ಸುತ್ತುಗಳು ಮುಕ್ತಾಯವಾಗಿದ್ದು, ಕಾಂಗ್ರೆಸ್ ಸುಮಾರ 8 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದೆ
14ನೇ ಸುತ್ತಿನ ಮುಕ್ತಾಯಕ್ಕೆ ಕಾಂಗ್ರೆಸ್‌ಗೆ 7,423 ಮತಗಳ ಮುನ್ನಡೆ ಸಾಧಿಸಿದೆ.
ಶ್ರೀನಿವಾಸ್ ದಾಸ್ ಕರಿಯಪ್ಪ ಬಿಜೆಪಿ – 39,037
ಸಮರ್ಥ ಶಾಮನೂರು ಕಾಂಗ್ರೆಸ್ – 46,460
ಅಪ್ಸರ್ ಕೊಡ್ಲಿಪೇಟೆ ಎಸ್ ಡಿ ಪಿ ಐ 15,303
ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ
ಈ ಬಾರಿ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಕುಟುಂಬದ ಸಮರ್ಥ್ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ ದಾಸ ಕರಿಯಪ್ಪ ಸ್ಪರ್ಧೆ ಮಾಡಿದ್ದರು. ಉಳಿದಂತೆ ಇತರೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಶೇ. 70 ರಷ್ಟು ಮತದಾನವಾಗಿತ್ತು.
ಇದೀಗ ಹಾಲಿ ಶಾಸಕರ ಸಾವಿನಿಂದ ತೆರವಾದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡನೇ ಉಪಸಮರವಾಗಿದ್ದು, ಕಾಂಗ್ರೆಸ್ ಅಧಿಕಾರ ಚುಕಾಣಿ ಹಿಡಿದ ಸುಮಾರು ಮೂರು ವರ್ಷಗಳ ಹೊಸ್ತಿಲಲ್ಲಿ ಈ ಉಪಚುನಾವಣೆ ಎದುರಾಗಿದೆ. ಮೂರು ವರ್ಷದಲ್ಲಿನ ಸರ್ಕಾರದ ಕಾರ್ಯವೈಖರಿ ಉಪಸಮರದ ಮೇಲೆ ಹೇಗೆ ಪರಿಣಾಮ ಬೀರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ದಾವಣಗೆರೆ ಬೈ ಎಲೆಕ್ಷನ್ ಟಿಕೆಟ್ ಘೋಷಣೆಗೂ ಮೊದಲೇ ಜಿದ್ದಾಜಿದ್ದಿ ಜೋರಾಗಿತ್ತು. ಈ ಬಾರಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿತ್ತು. ಆದ್ರೆ ಕಾಂಗ್ರೆಸ್ ತನ್ನ ಪಕ್ಷದ ಪರಿಪಾಠದಂತೆ ಶಾಮನೂರು ಅವರ ನಿಧನದ ಹಿನ್ನೆಲೆ ತೆರವಾದ ಸ್ಥಾನಕ್ಕಾಗಿ ಮೊಮ್ಮಗನಿಗೆ ಟಿಕೆಟ್ ನೀಡಿದ್ರು. ಟಿಕೆಟ್ ಸಿಗದೆ ಹಿನ್ನೆಲೆ ಅಲ್ಪಸಂಖ್ಯಾತ ಮುಖಂಡರ ಆಕ್ರೋಶದ ಕಟ್ಟೆ ಒಡೆದಿತ್ತು. ಈ ಭಿನ್ನಮತದ ಎಫೆಕ್ಟ್ ದಾವಣಗೆರೆ ದಕ್ಷಿಣ ಕ್ಷೇತ್ರದ ಬೈ ಎಲೆಕ್ಷನ್ ಮತಗಳ ಮೇಲೂ ಆಗಿದೆ.
