ಹರಿಹರ ಆರೋಗ್ಯ ಮಾತೆಯ ಬೆಸಿಲಿಕಾ ವಾರ್ಷಿಕ ಮಹೋತ್ಸವ: ಭವ್ಯ ರಥೋತ್ಸವ
ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಹರಿಹರ ಆರೋಗ್ಯ ಮಾತೆಯ ಬೆಸಿಲಿಕಾದ ವಾರ್ಷಿಕ ಮಹೋತ್ಸವ

ಹರಿಹರ ಆರೋಗ್ಯ ಮಾತೆಯ ಬೆಸಿಲಿಕಾ ವಾರ್ಷಿಕ ಮಹೋತ್ಸವ: ಭವ್ಯ ರಥೋತ್ಸವ
ಹರಿಹರ, ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಹರಿಹರ ಆರೋಗ್ಯ ಮಾತೆಯ ಬೆಸಿಲಿಕಾದ ವಾರ್ಷಿಕ ಮಹೋತ್ಸವ – 2026 ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗುತ್ತಿದ್ದು, ಇದರ ಮುಖ್ಯ ಆಕರ್ಷಣೆಯಾದ ಭವ್ಯ ಮೇರಿ ರಥೋತ್ಸವವು ಮಂಗಳವಾರ, 08 ಸೆಪ್ಟೆಂಬರ್ 2026 ರಂದು ಸಂಜೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ. ಈ ವರ್ಷದ ಉತ್ಸವವು “ಹರಿಹರ ಮಾತೆ – ಸಕಲ ನಿರ್ಗತಿಕರ ಆಶ್ರಯದಾತೆ” ಎಂಬ ಧೇಯ ವಾಕ್ಯದೊಂದಿಗೆ ಆಚರಿಸಲ್ಪಡುತ್ತಿದೆ.
ಧ್ವಜಾರೋಹಣ ಮತ್ತು ನವೇನ ದಿನಗಳು:
ಕಳೆದ ಆಗಸ್ಟ್ 30 ರಂದು ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಠ ಆಡಳಿತಾಧಿಕಾರಿಗಳಾದ ಪರಮಪೂಜ್ಯ ಡಾ|| ಡುಮಿಂಗ್ ಡಯಾಸ್ ಅವರ ದಿವ್ಯ ಹಸ್ತದಿಂದ ಚಾಲನೆಗೊಂಡ ಧ್ವಜಾರೋಹಣದೊಂದಿಗೆ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಅಂದಿನಿಂದ ಸೆಪ್ಟೆಂಬರ್ 07 ರವರೆಗೆ ಪ್ರತಿದಿನ ಸಂಜೆ ನವೇನ ಪ್ರಾರ್ಥನೆ, ಭವ್ಯ ಮೆರವಣಿಗೆ, ದಿವ್ಯ ಬಲಿಪೂಜೆ ಮತ್ತು ಅನ್ನಸಂತರ್ಪಣೆಗಳು ಯಶಸ್ವಿಯಾಗಿ ನೆರವೇರಿವೆ. ಸೆಪ್ಟೆಂಬರ್ 07 (ಸೋಮವಾರ) ಸಂಜೆ 5:30 ಕ್ಕೆ ಮೈಸೂರು ಧರ್ಮಧ್ಯಕ್ಷರಾದ ಪರಮಪೂಜ್ಯ ಡಾ|| ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಗಾಯನ ಬಲಿಪೂಜೆ ಜರುಗಲಿದೆ.
ಮಹೋತ್ಸವ ದಿನದ (ಸೆಪ್ಟೆಂಬರ್ 08) ಪ್ರಮುಖ ಕಾರ್ಯಕ್ರಮಗಳು:
ಮಹೋತ್ಸವದ ಪ್ರಮುಖ ದಿನವಾದ ಮಂಗಳವಾರದಂದು ಮುಂಜಾನೆಯಿಂದಲೇ ವಿವಿಧ ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು, ಮಲಯಾಳಂ, ಕೊಂಕಣಿ ಮತ್ತು ಇಂಗ್ಲಿಷ್) ದಿವ್ಯ ಬಲಿಪೂಜೆಗಳು ಜರುಗಲಿವೆ.
ಬೆಳಗ್ಗೆ 11:00 ಗಂಟೆಗೆ ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಠ ಆಡಳಿತಾಧಿಕಾರಿಗಳಾದ ಪರಮಪೂಜ್ಯ ಡಾ|| ಡುಮಿಂಗ್ ಡಯಾಸ್ ಅವರ ನೇತೃತ್ವದಲ್ಲಿ ಮುಖ್ಯ ಕನ್ನಡ ಜಂಟಿ ದಿವ್ಯ ಬಲಿಪೂಜೆ ನೆರವೇರಲಿದೆ.
ಮಧ್ಯಾಹ್ನ 2:30 ಕ್ಕೆ ಯೇಸು ಸ್ಪರ್ಶ ತಂಡದಿಂದ ಪರಮ ಪ್ರಸಾದದ ವಿಶೇಷ ಆರಾಧನೆ ಇರಲಿದೆ.
ಭವ್ಯ ತೇರಿನ ಮೆರವಣಿಗೆ: ಅತಿ ಮುಖ್ಯ ಕಾರ್ಯಕ್ರಮವಾದ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕೃತಗೊಂಡ ಆರೋಗ್ಯ ಮಾತೆಯ ಭವ್ಯ ರಥೋತ್ಸವದ ಮೆರವಣಿಗೆಯು ಸಂಜೆ 5:00 ಗಂಟೆಗೆ ಚಾಲನೆಗೊಳ್ಳಲಿದ್ದು, ಭಕ್ತಸಾಗರವು ಜಯಘೋಷಗಳೊಂದಿಗೆ ಪಾಲ್ಗೊಳ್ಳಲಿದೆ. ತದನಂತರ ರಾತ್ರಿ 8:30 ಕ್ಕೆ ವಂದನಾರ್ಪಣೆಯೊಂದಿಗೆ ಮಹೋತ್ಸವ ಮುಕ್ತಾಯಗೊಳ್ಳಲಿದೆ.
ಸೆಪ್ಟೆಂಬರ್ 09 ರ ಕಾರ್ಯಕ್ರಮಗಳು:
ಮಹೋತ್ಸವದ ಮರುದಿನವಾದ ಬುಧವಾರ ಬೆಳಗ್ಗೆ 8:00, 10:30, ಮಧ್ಯಾಹ್ನ 12:00 ಮತ್ತು ಸಂಜೆ 4:00 ಕ್ಕೆ ಬಲಿಪೂಜೆಗಳು ಇರಲಿವೆ. ವಿಶೇಷವಾಗಿ ಬೆಳಗ್ಗೆ 9:00 ಗಂಟೆಗೆ ಯೂಕರಿಸ್ಟ್ ವಾಹನಗಳ ಆಶೀರ್ವಚನ ಹಾಗೂ ಸಂಜೆ 5:30 ಕ್ಕೆ ಯಾತ್ರಿಕರಿಗೆ ಆಶೀರ್ವಚನ ನೀಡಲಾಗುತ್ತದೆ.
ಭಕ್ತಾದಿಗಳಿಗೆ ಸಕಲ ಸೌಲಭ್ಯ:
ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳ ಅನುಕೂಲಕ್ಕಾಗಿ ಚರ್ಚ್ ಆವರಣದಲ್ಲಿ ಮೇಣದಬತ್ತಿ, ಧಾರ್ಮಿಕ ಪುಸ್ತಕಗಳು, ಹರಕೆಯ ವಸ್ತುಗಳ ಮಾರಾಟಕ್ಕೆ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ. ರೋಗಿ ಗಳಿಗಾಗಿ ಹಾಗೂ ಪಾಪನಿವೇದನೆಗಾಗಿ ವಿಶೇಷ ಪ್ರಾರ್ಥನಾ ವ್ಯವಸ್ಥೆ ಮಾಡಲಾಗಿದೆ. ಊಟದ ವ್ಯವಸ್ಥೆ ಹಾಗೂ ವಾಹನ ನಿಲುಗಡೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಬೆಸಿಲಿಕಾದ ರೆಕ್ಟರ್ ಹಾಗೂ ಪ್ರಧಾನ ಗುರುಗಳಾದ ವಂ. ಫಾ|| ಜಾರ್ಜ್ ಕೆ. ಎ., ಸಹಾಯಕ ಗುರುಗಳು ಮತ್ತು ಧರ್ಮಭಗಿನಿಯರು ಹಾಜರಿದ್ದರು.
– ವಿಶೇಷ ವರದಿ,ಶೇಖ್ ಅಲ್ತಾಫ್ ಹರಿಹರ.
