ಭದ್ರಾ ಜಲಾಶಯದ ಕೊನೆ ಭಾಗದ ತೋಟಗಳಿಗೆ ನೀರು ಹರಿಸಿ: ಮಲೇಬೆನ್ನೂರಿನಲ್ಲಿ ರೈತರ ತೀವ್ರ ಆಕ್ರೋಶ
ಮೇಲ್ಭಾಗದ ರೈತರ ಅಕ್ರಮಕ್ಕೆ ಕೊನೆ ಭಾಗದ ರೈತರು ಬಲಿ:

ಭದ್ರಾ ಜಲಾಶಯದ ಕೊನೆ ಭಾಗದ ತೋಟಗಳಿಗೆ ನೀರು ಹರಿಸಿ: ಮಲೇಬೆನ್ನೂರಿನಲ್ಲಿ ರೈತರ ತೀವ್ರ ಆಕ್ರೋಶ
ವಿಜಯ್ ಪ್ರಭಾಸ್ ನ್ಯೂಸ್ ಮಲೇಬೆನ್ನೂರು: ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಜಮೀನುಗಳಿಗೆ ನೀರು ಹರಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಪ್ರಭಾರಿ ಸೂಪರಿಂಟೆಂಡಿಂಗ್ ಇಂಜಿನಿಯರ್ (ಎಸ್‌ಇ) ರವಿಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಭದ್ರಾ ಕಾಲುವೆಯಲ್ಲಿ ನೀರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರೈತರೊಂದಿಗಿನ ತುರ್ತು ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಭತ್ತದ ಬದಲು ತೋಟಗಳಿಗೆ ನೀರು ಬಳಸಿ:
ಪ್ರಸ್ತುತ ಎದುರಾಗಿರುವ ಭೀಕರ ನೀರಿನ ಅಭಾವದ ಅಂಕಿ-ಅಂಶಗಳನ್ನು ರೈತರ ಮುಂದಿಟ್ಟ ಎಸ್‌ಇ ರವಿಕುಮಾರ್, “ರೈತರು ಈ ಹಂತದಲ್ಲಿ ಭತ್ತದ ಗದ್ದೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಕೇವಲ ಒಣಗುತ್ತಿರುವ ಅಡಿಕೆ ಹಾಗೂ ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಮಾತ್ರ ನೀರನ್ನು ಮಿತವಾಗಿ ಬಳಸಬೇಕು” ಎಂದು ಮನವಿ ಮಾಡಿದರು. ಇದೇ ವೇಳೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಂತೆ, ಸಭೆಯಲ್ಲಿದ್ದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ವಾದಕ್ಕಿಳಿದರು.
ಮೇಲ್ಭಾಗದ ರೈತರ ಅಕ್ರಮಕ್ಕೆ ಕೊನೆ ಭಾಗದ ರೈತರು ಬಲಿ:
“ಹಿಂದೆ ಟಾಸ್ಕ್ ಫೋರ್ಸ್ ಕಟ್ಟುನಿಟ್ಟಿನ ಭದ್ರತೆಯಲ್ಲಿ ನೀರು ಹರಿಸಲಾಗುತ್ತಿತ್ತು, ಈಗ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ? ಮೇಲ್ಭಾಗದ ರೈತರು ಆಂತರಿಕ ಸರದಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಅಕ್ರಮ ಪಂಪ್‌ಸೆಟ್‌ಗಳ ಮೂಲಕ ನೀರು ಕದಿಯುತ್ತಿರುವುದು ಇಲಾಖೆಗೆ ಗೊತ್ತಿಲ್ಲವೇ? ದಾವಣಗೆರೆಯ ರಾಜಕೀಯಕ್ಕಾಗಿ ಹರಿಹರ ಭಾಗದ ರೈತರನ್ನು ಬಲಿ ಕೊಡಬೇಡಿ” ಎಂದು ರೈತರು ಕಂದಾಯ ಮತ್ತು ನೀರಾವರಿ ಇಲಾಖೆಯ ವಿರುದ್ಧ ಕಿಡಿಕಾರಿದರು.
ಸಭೆಯಲ್ಲಿದ್ದ ಪ್ರಮುಖ ರೈತ ಮುಖಂಡರಾದ ತಿಪ್ಪೇರುದ್ರಪ್ಪ, ಚಂದ್ರಪ್ಪ, ಫಾಲಾಕ್ಷಪ್ಪ, ರಮೇಶ್, ಅಭಿನಂದನ್ ಪರಶುರಾಮ್, ಶೇಖರಪ್ಪ, ಅಶೋಕ್ ಸೇರಿದಂತೆ ಹಲವರು ಮಾತನಾಡಿ, “ಕೊನೆ ಭಾಗದಲ್ಲಿರುವ ನಮ್ಮ ಹತ್ತಾರು ಎಕರೆ ಅಡಿಕೆ ಮತ್ತು ತೆಂಗಿನ ತೋಟಗಳು ನೀರಿಲ್ಲದೆ ಕಣ್ಮುಂದೆಯೇ ಒಣಗುತ್ತಿವೆ. ನಮಗೆ ತಕ್ಷಣ ನೀರು ಹರಿಸಲೇಬೇಕು” ಎಂದು ಪಟ್ಟು ಹಿಡಿದು ಎಸ್‌ಇ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ಸಭೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ, ಅಧಿಕಾರಿಗಳು ಮೌನಕ್ಕೆ ಶರಣಾಗಬೇಕಾಯಿತು.
೭ ದಿನಗಳ ಕಾಲ ಪೊಲೀಸ್ ಭದ್ರತೆಯಲ್ಲಿ ನೀರು ಹರಿಸುವ ಭರವಸೆ:
ರೈತರ ಆಕ್ರೋಶಕ್ಕೆ ಸ್ಪಂದಿಸಿದ ಎಸ್‌ಇ ರವಿಕುಮಾರ್, “ಕಾಲುವೆ ಮೇಲ್ಭಾಗದಲ್ಲಿ ಈಗಾಗಲೇ ನೀರಿನ ಹರಿವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ನಾಳೆ ಸಂಜೆ ವೇಳೆಗೆ ಗೇಜ್ ಮಟ್ಟ ಸುಧಾರಿಸಲಿದೆ. ಅಕ್ರಮ ನೀರು ಎತ್ತುವುದನ್ನು ತಡೆಯಲು ಜಿಲ್ಲಾಧಿಕಾರಿಗಳಿಗೆ ಆಯ್ದ ಭಾಗಗಳಲ್ಲಿ ೧೪೪ನೇ ಸೆಕ್ಷನ್ ಜಾರಿಗೊಳಿಸುವಂತೆ ಅಧಿಕೃತ ಮನವಿ ಸಲ್ಲಿಸಲಾಗಿದೆ. ಪೊಲೀಸ್, ಬೆಸ್ಕಾಂ ಹಾಗೂ ಕಂದಾಯ ಇಲಾಖೆಯ ಜಂಟಿ ಭದ್ರತೆಯಲ್ಲಿ ಮುಂದಿನ ೭ ದಿನಗಳ ಕಾಲ ಹೆಚ್ಚಿನ ಪ್ರಮಾಣದಲ್ಲಿ ಕೊನೆ ಭಾಗದ ತೋಟಗಳಿಗೆ ನೀರು ತಲುಪಿಸಲು ಪ್ರಾಮಾಣಿಕ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಿಎಸ್ಐ ಹಾರೂನ್ ಅಖ್ತರ್ ಅವರು, ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಸಂಪೂರ್ಣ ಭದ್ರತೆಯನ್ನು ಒದಗಿಸುವುದಾಗಿ ರೈತರಿಗೆ ಭರವಸೆ ನೀಡಿದರು. ಸಭೆಯಲ್ಲಿ ಎಇಇ ಕೃಷ್ಣಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿ ತಮಗಿರುವ ಪ್ರಾಯೋಗಿಕ ಸಮಸ್ಯೆಗಳನ್ನು ರೈತರ ಮುಂದೆ ಹಂಚಿಕೊಂಡರು
ವರದಿ ತೌಫೀಕ್ ಉಲ್ಲ ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು.