ನಂದಿಗುಂದದಲ್ಲಿ ಕಳಪೆ ರಸ್ತೆ ಕಾಮಗಾರಿ ತಡೆದ ಕರವೇ ಸ್ವಾಭಿಮಾನಿ ಸೇನೆ ಮತ್ತು ಗ್ರಾಮಸ್ಥರು: ಲೋಕಾಯುಕ್ತಕ್ಕೆ ದೂರು ನೀಡಲು ತೀರ್ಮಾನ
ಗ್ರಾಮದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಜೆ 6 ಗಂಟೆಯ ನಂತರ ರಸ್ತೆ ಕಾಂಕ್ರೀಟೀಕರಣ ಕೆಲಸವನ್ನು ಆರಂಭಿಸಲಾಗಿತ್ತು.

ನಂದಿಗುಂದದಲ್ಲಿ ಕಳಪೆ ರಸ್ತೆ ಕಾಮಗಾರಿ ತಡೆದ ಕರವೇ ಸ್ವಾಭಿಮಾನಿ ಸೇನೆ ಮತ್ತು ಗ್ರಾಮಸ್ಥರು: ಲೋಕಾಯುಕ್ತಕ್ಕೆ ದೂರು ನೀಡಲು ತೀರ್ಮಾನ
ವಿಜಯ್ ಪ್ರಭಾಸ್ ನ್ಯೂಸ್ ಕೊಡಗು ಜಿಲ್ಲೆ ಸೋಮವಾರಪೇಟೆ: ತಾಲೂಕಿನ ನಂದಿಗುಂದ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ವತಿಯಿಂದ ಕೈಗೊಳ್ಳಲಾಗಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಕಳಪೆ ಗುಣಮಟ್ಟ ಎದ್ದು ಕಂಡ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮತ್ತು ಗ್ರಾಮಸ್ಥರು ಜಂಟಿಯಾಗಿ ಪ್ರತಿಭಟಿಸಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಗ್ರಾಮದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಜೆ 6 ಗಂಟೆಯ ನಂತರ ರಸ್ತೆ ಕಾಂಕ್ರೀಟೀಕರಣ ಕೆಲಸವನ್ನು ಆರಂಭಿಸಲಾಗಿತ್ತು. ಸ್ಥಳದಲ್ಲಿ ಯಾವುದೇ ಜವಾಬ್ದಾರಿಯುತ KRIDL ಅಧಿಕಾರಿಗಳಾಗಲಿ, ಇಂಜಿನಿಯರ್ ಆಗಲಿ ಅಥವಾ ಗುತ್ತಿಗೆದಾರರಾಗಲಿ ಇರಲಿಲ್ಲ. ಇನ್ನು ಆತಂಕಕಾರಿ ವಿಷಯವೆಂದರೆ, ಇಂಜಿನಿಯರ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ತಮಗೆ ಇಂತಹದ್ದೊಂದು ರಸ್ತೆ ಕಾಮಗಾರಿ ನಡೆಯುತ್ತಿರುವುದೇ ಗೊತ್ತಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಅಧಿಕಾರಿಗಳ ಸಮ್ಮತಿಯಿಲ್ಲದೆ ರಾತ್ರೋರಾತ್ರಿ ರಹಸ್ಯವಾಗಿ ಈ ಕಾಮಗಾರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತಾಂತ್ರಿಕ ನಿಯಮಗಳ ಉಲ್ಲಂಘನೆ:
ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಾಗ ಸಿಮೆಂಟ್ನಲ್ಲಿರುವ ತೇವಾಂಶ ಮತ್ತು ಗಟ್ಟಿ ದ್ರಾವಣವನ್ನು ಮಣ್ಣು ಹೀರಿಕೊಳ್ಳಬಾರದು ಎಂಬ ತಾಂತ್ರಿಕ ಕಾರಣಕ್ಕಾಗಿ ತಳಭಾಗದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಶೀಟ್ ಅಳವಡಿಸಬೇಕು. ಜೊತೆಗೆ ರೋಲರ್ ಮೂಲಕ ಜಲ್ಲಿ ಕಲ್ಲುಗಳನ್ನು ಹಾಸಿ ತಳಪಾಯ ಗಟ್ಟಿಗೊಳಿಸಬೇಕು. ಆದರೆ ಇಲ್ಲಿ ಯಾವುದೇ ನಿಯಮ ಪಾಲಿಸದೆ, ಕನಿಷ್ಠ ಪ್ಲಾಸ್ಟಿಕ್ ಶೀಟ್ ಕೂಡ ಹಾಕದೆ ಬರಿ ಮಣ್ಣಿನ ಮೇಲೆಯೇ ನೇರವಾಗಿ ಕಾಂಕ್ರೀಟ್ ಮಿಶ್ರಣವನ್ನು ಸುರಿಯಲಾಗುತ್ತಿತ್ತು. ಇಂತಹ ಕಳಪೆ ತಂತ್ರಜ್ಞಾನದಿಂದಾಗಿ ರಸ್ತೆ ಕೆಲವೇ ದಿನಗಳಲ್ಲಿ ಬಿರುಕು ಬಿಟ್ಟು ಹಾಳಾಗುವುದು ಸ್ಪಷ್ಟವಾಗಿದ್ದು, ಸಾರ್ವಜನಿಕರ ತೆರಿಗೆ ಹಣದಲ್ಲಿ ಇಂತಹ ಕಳಪೆ ಕಾಮಗಾರಿ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ರಾತ್ರಿ ವೇಳೆ ನಡೆಯುತ್ತಿದ್ದ ಈ ಕಳಪೆ ಕಾಮಗಾರಿಯ ಕುರಿತು ಮಾಹಿತಿ ಪಡೆದ ಕರವೇ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಹಾಗೂ ನಂದಿಗುಂದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತರಾಟೆಗೆ ತೆಗೆದುಕೊಂಡರು. ಯಾರ ಅನುಮತಿಯೊಂದಿಗೆ, ಯಾವ ಇಂಜಿನಿಯರ್ ಉಸ್ತುವಾರಿಯಲ್ಲಿ ಈ ಕಳಪೆ ರಸ್ತೆ ಮಾಡಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸ್ಥಳದಲ್ಲೇ ಕಾಮಗಾರಿಯನ್ನು ಅರ್ಧಕ್ಕೆ ತಡೆದು ನಿಲ್ಲಿಸಿದರು.
ಜೆಸಿಬಿ ಮೂಲಕ ತೆರವುಗೊಳಿಸಲು ಪಟ್ಟು:
“ಈಗಾಗಲೇ ಮಣ್ಣಿನ ಮೇಲೆ ನಿಯಮಬಾಹಿರವಾಗಿ ಮಾಡಲಾಗಿರುವ ಕಳಪೆ ರಸ್ತೆಯನ್ನು ನಾಳೆಯೇ ಜೆಸಿಬಿ ಬಳಸಿ ಸಂಪೂರ್ಣವಾಗಿ ತೆರವುಗೊಳಿಸಬೇಕು. ಆ ಜಾಗದಲ್ಲಿ ಹೊಸದಾಗಿ ಪ್ಲಾಸ್ಟಿಕ್ ಶೀಟ್ ಅಳವಡಿಸಿ, ಉತ್ತಮ ಗುಣಮಟ್ಟದ ಜಲ್ಲಿ ಹಾಗೂ ಸಿಮೆಂಟ್ ಬಳಸಿ ಕಾಂಕ್ರೀಟ್ ರಸ್ತೆಯನ್ನು ಮರುನಿರ್ಮಾಣ ಮಾಡಿಕೊಡಬೇಕು” ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಗ್ರಾಮಸ್ಥರು ಕಟ್ಟುನಿಟ್ಟಿನ ಪಟ್ಟು ಹಿಡಿದಿದ್ದಾರೆ.
ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯಲು ಸಂಚು ರೂಪಿಸಿ, ರಾತ್ರಿ ಹೊತ್ತು ಕಳಪೆ ಕಾಮಗಾರಿ ನಡೆಸಿದ KRIDL ಅಧಿಕಾರಿಗಳು ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಗ್ರಾಮಸ್ಥರು ಹಾಗೂ ಕರವೇ ಸ್ವಾಭಿಮಾನಿ ಸೇನೆ ನಿರ್ಧರಿಸಿದೆ. ಈ ವ್ಯವಸ್ಥಿತ ಭ್ರಷ್ಟಾಚಾರದ ವಿರುದ್ಧ ಶೀಘ್ರದಲ್ಲೇ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.